ಕಂಡ ಕಂಡವರೇನು ಬಲ್ಲರಿದನು ಉಂಡವನು ಕಂಡಿಹನು ಇದರ ಹದನು ಎಂಬ ಕವಿ ಚೆನ್ನವೀರ ಕಣವಿ ಅವರ ನುಡಿಯಂತೆ ಗೀತಾಪರಿವಾರದ ಒಡನಾಟದಲ್ಲಿರುವವರಿಗಷ್ಟೇ ಗೊತ್ತು ಚೈತನ್ಯದ ಚಿಲುಮೆಯಂತಿರುವ ಗೀತಾಪರಿವಾರದ ಅನುಪಮ ಸೌಂದರ್ಯ ಚೆಲುವು. ಮಂದಿರದಂತಿರುವ ಗೀತಾಪರಿವಾರದ ಹಂದರದಲ್ಲಿ ನಡೆಸುತ್ತಿರುವ ಆನ್ಲೈನ್ ತರಗತಿಗಳು ಗೀತೋಪದೇಶದ ಬಂಧುರವಾಗಿದೆ. ಗೀತೆಕಲಿಕೆಯ ಕ್ರಮವಂತು ಅತ್ಯಂತ ಸುಂದರವಾಗಿದೆ. ಪಂಚಮವೇದದ ಚೆಲುವಿನೊಡನೆ ಗೀತಾ ಸಾಧಕರ ಒಲವು ಹಾಗೂ ನಿಸ್ವಾರ್ಥ ಸೇವಿಗಳ ಬಲವು ಕೂಡಿ
ಗೀತಾ ಪರಿವಾರದ ಗೆಲುವಿಗೆ ಪೂರಕವಾಗಿವೆ. ಸನಾತನ ಧರ್ಮದ ಸಾರಸರ್ವಸ್ವವೇ ಆಗಿರುವ ಭಗವದ್ಗೀತೆಯಕಲಿಕೆಯು ವಿಶ್ವದಾದ್ಯಂತ ಪಸರಿಸುತ್ತಿದೆ. ಒಂದು ವಿಶ್ವವಿದ್ಯಾನಿಲಯದ ಸಾಧನೆಗೂ ಮೀರಿದ ಸಾಧನೆಯನ್ನು ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳ ಮೂಲಕ ಗೀತಾ ಪರಿವಾರವು ಸಾಧಿಸಿ ತೋರಿಸುತ್ತಿದೆ. ಕೂತಲ್ಲೇ ತಮಗೆ ಸರಿಹೊಂದುವ ಸಮಯದಲ್ಲೇ ಆಬಾಲವೃದ್ಧರೆಲ್ಲರೂ ಇದರ ಲಾಭವನ್ನು ಪಡೆಯುವಂತಾಗಿದೆ. ಬಾಲಸಂಸ್ಕಾರ ತರಗತಿಗಳಂತೂ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರವನ್ನು ನೀಡುತ್ತಿವೆ.
ಗೀತಾಪರಿವಾರದಲ್ಲಿ ವಿಶ್ವಾಸ, ನಂಬಿಕೆ, ಗೌರವ, ಮಮತೆ, ಮಾತೃವಾತ್ಸಲ್ಯ, ಸಹಕಾರ, ಸೌಜನ್ಯ, ಸಂಭ್ರಮ, ಮನದ ಮಾತುಗಳು ಎಲ್ಲವೂ ಅಡಕವಾಗಿವೆ.
ನಕಾರಾತ್ಮಕ ಭಾವನೆಗಳನ್ನು ಲಯಗೊಳಿಸಿ ಸಕಾರಾತ್ಮಕ ಆಲೋಚನಾ ಪಥದಲ್ಲಿ ಮುನ್ನಡೆಸುವ ಸಾಮರ್ಥ್ಯ ಅದರದ್ದಾಗಿದೆ. ಮಾನಸಿಕ ಆರೋಗ್ಯ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ.
ನಾನು ಮನಸ್ಸಿಲ್ಲದ ಮನಸ್ಸಿನಿಂದಲೇ ಗೀತಾಪರಿವಾರದ ಸಂಪರ್ಕಕ್ಕೆ ಬಂದೆ. ನನಗಾದ ಅದರ ವಿರಾಟ್ ಸ್ವರೂಪ ದರ್ಶನ ನನ್ನನ್ನು ಮೂಕವಿಸ್ಮಯವನ್ನಾಗಿಸಿತು.
ಗೀತಾಪರಿವಾರದ ಕರೆ ಮಾಡುವ ವಿಭಾಗದಲ್ಲಿ ಸೇವಾನಿರತಳಾಗಿದ್ದ ನನ್ನ ಸೋದರಿ ಕುಸುಮ ಅಕ್ಕ ನನ್ನನ್ನು ಬಲವಂತವಾಗಿ ಗೀತಾ ಕಲಿಕೆಗೆ ಎಳೆದು ಕರೆತಂದು ಗೀತಾಪರಿವಾರದ ಸೌಂದರ್ಯವನ್ನು ಆಸ್ವಾದಿಸಲು ಅನುವಾದಳು. ಸೀಮಾ ಅಕ್ಕ, ರಾಧಿಕಾರಾವ್ ಅಕ್ಕ, ರೂಪ ವಿ ಪೈ ಅಕ್ಕ ಈ ಮೂವರ ಕಾರ್ಯ ವೈಖರಿ, ಬದ್ಧತೆ, ಸಮಯ ಪ್ರಜ್ಞೆ, ತಾಳ್ಮೆಯನ್ನು ಕಂಡು ಬೆರಗಾದೆ. ನಾನು ಗೀತಾಪರಿವಾರದೊಡನಾಟವನ್ನು ಹೊಂದಬೇಕೆಂಬ ನಿರ್ಧಾರಕ್ಕೆ ಬಂದೆ. ನಿರಂತರವಾಗಿ ಸೇವಾನಿರತಳಾಗಬೇಕೆಂಬ ಉತ್ಕಟ ಆಕಾಂಕ್ಷೆಗೆ ಒಳಗಾದೆ. ಕೃಷ್ಣನ ಕೃಪೆಯಿಂದ ಒಂದೇ ವಾರದೊಳಗೆ ಟೆಕ್ ತರಬೇತಿಯನ್ನು ಪಡೆದೆ. ಮೊದಲ ಬ್ಯಾಚ್ ನಲ್ಲೇ ಪೂಜಾ ಅಕ್ಕನೊಡನೆ ಸೇವೆಕೊಡುವ ಸೌಭಾಗ್ಯ ನನ್ನದಾಯಿತು. ಯಾವ ಜನ್ಮದ ಸುಕೃತವೋ, ಯಾವ ಪುಣ್ಯದ ಫಲವೋ, ಕೃಷ್ಣ ಪರಮಾತ್ಮನ ಒಲವೋ,
ಗೀತಾಪರಿವಾರದ ಒಡನಾಟದಿಂದ ನಿರ್ದಿಷ್ಟ ಸಮಯಕ್ಕೆ ನಿತ್ಯ ಗೀತಾಪಾಠ, ಉತ್ಸಾಹಿ ಗೀತಾ ಸಾಧಕರ ಕೂಟದ ದರ್ಶನ,
ಸುಂದರ ಅನುಪಠಣದ ನೋಟದ ಸೌಭಾಗ್ಯ ನನಗೆ ದೊರಕಿತು. ಸ್ವರಾಘಾತ, ಅಲ್ಪಪ್ರಾಣ, ಮಹಾಪ್ರಾಣದೆಡೆಗೆ ಒತ್ತು ನೀಡುತ್ತಾ, ಪರಿಶುದ್ಧ ಸ್ಪಷ್ಟ ಉಚ್ಚಾರಣೆಯ ತರಬೇತಿಯೊಡನೆ ಸಾಮೂಹಿಕ ಪಠಣದ ಅನುರಣಗೊಳ್ಳುವ ಪರಿ ಬೆರಗಾಗುವಂತೆ ಮಾಡಿತು. ಪ್ರತಿಸ್ತರದಲ್ಲೂ ಪ್ರಾರಂಭೋತ್ಸವ,
ಪರಿಚಯ ಸತ್ರದೊಂದಿಗೆ ಸಹಪಾಠಿಗಳ ಸ್ನೇಹ ಬೆಸುಗೆಯ ಸಿಂಚನ, ವಿವೇಚನ ಸತ್ರಗಳಿಂದ ಜ್ಞಾನ ಸಂಚಯ, ಆನಂದೋತ್ಸವದಲ್ಲಿ ಪ್ರತಿಭೆಗಳ ಅನಾವರಣ ಅಚ್ಚರಿಯನ್ನುಂಟುಮಾಡಿತು. ನಿತ್ಯ ಗೀತಾಮೃತ ಪಾನದೊಂದಿಗೆ ಗೀತಾಕಲಿಕೆಯ ಈ ಯಾನ ವ್ಯಕ್ತಿತ್ವ ವಿಕಸನದ ತಾಣದಂತೆ ಕಂಡಿತು. ಪ್ರತಿ ನಿತ್ಯವೂ ಸಜ್ಜನರೊಡನಾಟದ ಸೌಭಾಗ್ಯ ನನಗೆ ದೊರಕಿತು.
*ಕಿಂಮಧುನಾ ಕಿಂ ವಿಧಯನಾ ಕಿಂ ಸುಧಾಯಾ ಕಿಂ ಚವಸುಧಯಾಖಿಲಯಾ| ಯದಿ ಹೃದಯಹಾರಿಚರಿತಃ*
ಇದಕ್ಕಿಂತ ಅತಿಶಯವಾದುದು ಯಾವುದು?
ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ ನೆಮ್ಮದಿಯನ್ನೂ ತೃಪ್ತಿಯನ್ನೂ ಆಹ್ಲಾದವನ್ನೂ ನೀಡುವಂಥದ್ದು. ಸರ್ವಜ್ಞ ಹೇಳುವಂತೆ ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ, ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತಿಹದು ಸರ್ವಜ್ಞ||
ಪ್ರತಿ ನಿತ್ಯ ತೆರೆಯ ಮೇಲೆ ನೋಡುತ್ತಿದ್ದ ಪ್ರಶಿಕ್ಷರು ತೆರೆಯ ಹಿಂದೆ ಸಂಪರ್ಕಿಸುತ್ತಿದ್ದ ತಾಂತ್ರಿಕ ಸಹಾಯಕರು, ಗುಂಪು ಸಂಯೋಜಕರು, ಸಮೂಹ ಸಂಯೋಜಕರುಗಳನ್ನು ನೇರವಾಗಿ ನೋಡುವ ಹಂಬಲ ಪ್ರತಿಯೊಬ್ಬರಲ್ಲೂ ಮನೆ ಮಾಡಿತ್ತು.
ಬೆಂಗಳೂರು ನಿವಾಸಿಯಾದ ನಾನು ಮುಂಬೈಗೆ ಬರುವ ವಿಚಾರ ತಿಳಿದೊಡನೆಯೇ ಹಲವರು ತಮ್ಮ ಮನೆಗೆ ನನ್ನನ್ನು ಆಹ್ವಾನಿಸಿದರು. ಆಗ ತಟ್ಟನೆ ನನ್ನ ಮನಸ್ಸಿಗೆ ಬಂದದ್ದು ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡ ಗೀತಾಪರಿವಾರದವರೆಲ್ಲಾ ಸಾರ್ವಜನಿಕ ಪ್ರದೇಶ ಒಂದರಲ್ಲಿ ಸೇರಿ ಗೀತಾಪಾರಾಯಣವನ್ನು ಮಾಡುವುದರಿಂದ ಪರಸ್ಪರ ಭೇಟಿ ಮಾಡುವುದರೊಂದಿಗೆ ಗೀತಾಪರಿವಾರದವರು ನಡೆಸುತ್ತಿರುವ ಆನ್ಲೈನ್ ಆಫ್ಲೈನ್ ತರಗತಿಗಳ ಪ್ರಚಾರವೂ ಆದಂತೆ ಆಗುತ್ತದೆ ಎಂಬ ಆಲೋಚನೆ. ಶ್ರುತಿ ನಾಯಕ್ ಅಕ್ಕನೊಂದಿಗೆ ಈ ಆಲೋಚನೆಯನ್ನು ಹಂಚಿಕೊಂಡಾಗ ಮೇಲಿನವರ ಒಪ್ಪಿಗೆಯನ್ನು ಪಡೆದು ಸಂತಸದಿಂದ ಸಮ್ಮತಿಸಿದರು. ಉಮಾ ರಾಮರಾವ್ ಅಕ್ಕ ಪೂರ್ಣ ಸಹಕಾರ ನೀಡಿದರು. ವಾಟ್ಸಪ್ ಗುಂಪಿನ ಸಹಕಾರದೊಂದಿಗೆ ಅಧಿಕ ಶ್ರಾವಣಮಾಸ ಶನಿವಾರದ ದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಎಲ್ಲರ ಸಮಯೋಚಿತ ಸಲಹೆಗಳೊಂದಿಗೆ ಗೀತಾಪಾರಾಯಣ ಮತ್ತು ಹನುಮಾನ ಚಾಲೀಸ ಪಠಣವು ಯಶಸ್ವಿಯಾಗಿ ನೆರವೇರಿತು. ಗೀತಾವ್ರತಿಗಳಾದ ಸುರೇಖಾ ಕಾಮತ್ ಅಕ್ಕ ಮತ್ತು ಶ್ರುತಿ ನಾಯಕ್ ಅಕ್ಕ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇಬ್ಬರೂ ತಮ್ಮ ತಮ್ಮಅನುಭವವನ್ನು ಹಂಚಿಕೊಂಡರು. ಅವರ ಮಾತುಗಳು ಉಳಿದವರಿಗೆ ಸ್ಫೂರ್ತಿಯನ್ನು ನೀಡಿತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ 85 ವರ್ಷ ಹರಯದ ಅತ್ಯುತ್ಸಾಹಿ ರಾಮಚಂದ್ರ ಕುಲಕರ್ಣಿ ಅಣ್ಣ ಇಂದು ಗೀತಾವ್ರತಿಯಾಗಿರುವುದು ಹರ್ಷದಾಯಕ ಸಂಗತಿಯಾಗಿದೆ. ಗೀತಾಪರಿವಾದದ ಸಂಪರ್ಕದಲ್ಲಿರುವ ಪ್ರತಿಯೊಬ್ಬರೂ ಗೀತಾವ್ರತಿಗಳಾಗಬೇಕೆಂಬುದೇ ಪರಮ ಪೂಜ್ಯ ಸ್ವಾಮೀಜಿಯವರ ಇಂಗಿತವಾಗಿದೆ.
ಬೆಂಗಳೂರಿಗೆ ಮರಳಿದ ಬಳಿಕ ಅನುಭವಿ ಪ್ರಶಿಕ್ಷಕರ ಸಲಹೆ ಮತ್ತು ಸಹಕಾರದೊಂದಿಗೆ ಅಜ ಏಕಾದಶಿಯೊಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗೀತಾಪಾರಾಯಣವನ್ನು ಏರ್ಪಡಿಸಲಾಗಿತ್ತು. 82 ಜನ ಗೀತಾಸೇವಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಾಯಿಮಂದಿರದವರ ಸಹಕಾರದಿಂದ ಹೋಳಿಗೆ ಪಾಯಿಸದ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು.
ಭಗವಂತನ ಕೃಪೆಯಿಂದ ಬೆಂಗಳೂರು ಸಮೀಪದ ಬಾಗೇಪಲ್ಲಿಯ ಸತ್ಯ ಸಾಯಿ ಸ್ಕೂಲ್ ಮಕ್ಕಳಿಗೆ ಸಂಜೆ 3:50ಕ್ಕೆ ಭಗವದ್ಗೀತೆ L2 ಕ್ಲಾಸ್ ಹೋಸ್ಟ್ ಮಾಡುವ ಸೌಭಾಗ್ಯ ನನ್ನದಾಯಿತು. ನಮ್ಮ ದೇಶದ ಪ್ರತಿ ಶಾಲೆಯು ಗೀತಾಪರಿವಾರದ ಈ ಸೌಲಭ್ಯವನ್ನು ಪಡೆದುಕೊಳ್ಳುವಂತಾದರೆ ಭಾರತೀಯ ಸಂಸ್ಕೃತಿ, ಸಂಸ್ಕಾರ ಚಿರಸ್ಥಾಯಿ ಆಗುವುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಭಾರತೀಯರಾಗಿ ಜನ್ಮತಾಳಿದ ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಕಲಿಯಲೇ ಬೇಕು. ಭಗವಂತನ ನುಡಿಗಳೇ ಆಗಿರುವ ಭಗವದ್ಗೀತೆ ಅತಿಮಧುರ ಮಾತ್ರವಲ್ಲ
ಆತ್ಮೋದ್ಧಾರದ ಪರಮತತ್ತ್ವದ ವಿಚಾರ.
ಅಷ್ಟಾದಶಯೋಗದ ಚಲ್ವಿನ ಹಂದರವಾದ ಗೀತೆಯನ್ನು ಶುದ್ಧ ಹಾಗೂ ಸ್ಪಷ್ಟ ಉಚ್ಚಾರಣೆಯೊಂದಿಗೆ ವಿಶ್ವದಾದ್ಯಂತ ಗೀತಾಪರಿವಾರ ಪ್ರಚಾರ ಮಾಡುತ್ತಿದೆ.
ಶ್ರೀಮದ್ಭಗವದ್ಗೀತೆಯ ಪ್ರತಿ ನುಡಿಯೂ ಸತ್ಯ
ಬಿಡದೆ ಎಲ್ಲರೂ ಪಠಿಸಲೇ ಬೇಕು ನಿತ್ಯ. ದಿಟದಿ ಅಧಿಕವಾಗುವುದಾಗ ಪ್ರತಿಯೊಬ್ಬರ ಸಾಮರ್ಥ್ಯ. ಮುಕ್ತಿಪಥಕಿದು ಹೆದ್ದಾರಿಯೆಂಬುದೇ ತಥ್ಯ. ಈ ಸಲುವಾಗಿಯೇ ಗೀತಾಪರಿವಾರವೂ ನಿತ್ಯ ಗೀತಾಪಠಣ, ವಾರಕ್ಕೊಮ್ಮೆ ಸಂಪೂರ್ಣ ಗೀತಾ ಪಾರಾಯಣ, ಗೀತಾ ಚಿಂತನಿಕ,
ಪ್ರತಿ ತಿಂಗಳೂ ಏಕಾದಶಿಯ ದಿನದಂದು ದೇಶದ ಎಲ್ಲೆಡೆಯೂ ಆಫ್ಲೈನ್ ಮತ್ತು ಆನ್ಲೈನ್ ಭಗವದ್ಗೀತೆಯ ಸಂಪೂರ್ಣ ಪಾರಾಯಣ, ವಿವಿಧ ಹಂತದಲ್ಲಿ ಗೀತಾಕಂಠಸ್ಥೀಕರಣದ ಪರೀಕ್ಷೆಗಳನ್ನು ಆಯೋಜಿಸಿದೆ. ಭಗವದ್ಗೀತಾ ಕಲಿಕೆಗೆ ಪೂರಕವಾಗಿ ಪ್ರತಿ ಸ್ತರದಲ್ಲೂ ಏರ್ಪಡಿಸಿರುವ ವಿಶೇಷ ವ್ಯಾಕರಣ ಉಪನ್ಯಾಸವಂತೂ ಸಾಧಕರ ಜ್ಞಾನವನ್ನೂ ಭಾಷಾ ಸಾಮರ್ಥ್ಯವನನ್ನೂ ಹೆಚ್ಚಿಸಲು ಪೂರಕವಾಗಿದೆ. ಶ್ರೀವತ್ಸ ಜೋಶಿ ಅಣ್ಣ ಮತ್ತು ಶ್ರುತಿನಾಯಕ್ ಅಕ್ಕನೊಂದಿಗೆ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗುವ ಸದವಕಾಶವನ್ನು ಕೃಷ್ಣ ಪರಮಾತ್ಮ ನನಗೆ ಒದಗಿಸಿರುವುದು ಅತ್ಯಂತ ಸಂತಸವನ್ನು ನೀಡಿದೆ.
ವಿಶೇಷ ಸಂದರ್ಭಗಳಲ್ಲಿ ಗೀತಾಪರಿವಾರದ ವತಿಯಿಂದ ಆಯೋಜಿಸುವ ಸ್ನೇಹ ಮಿಲನ, ಗೀತಾಭಕ್ತಿ ಅಮೃತ ಮಹೋತ್ಸವದ ಕಾರ್ಯಕ್ರಮಗಳ ವ್ಯವಸ್ಥೆಯಂತೂ ಗೀತಾಸೇವಿಗಳ ಕಾರ್ಯನಿಷ್ಠೆ, ಬದ್ಧತೆ, ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.
ಶ್ರುತಿ ನಾಯಕ್ ಅಕ್ಕನ ದೆಸೆಯಿಂದ ಪುಣೆಯ ಸಮೀಪದಲ್ಲಿರುವ ಆಳಂದಿಯಲ್ಲಿ ಏರ್ಪಡಿಸಲಾಗಿದ್ದ ಗೀತಾಭಕ್ತಿ ಅಮೃತ ಮಹೋತ್ಸವ ಸಿದ್ಧತೆಗೆ ನಾನು ಸಾಕ್ಷಿಯಾಗಿದ್ದೆ. ಅಲ್ಲಿ ನನಗಾದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ಗೀತಾಭಕ್ತಿ ಅಮೃತ ಮಹೋತ್ಸವ ಸಿದ್ಧತೆ ಭರದಿಂದ ಸಾಗಿತ್ತು
ಸ್ವಚ್ಛತೆ, ಸ್ಪಷ್ಟತೆ ಉತ್ಸಾಹಗಳನು ಪ್ರತಿನಿಧಿಸಿತ್ತು
ನಿಸ್ವಾರ್ಥ ಸೇವಿಗಳ ಶಕ್ತಿ ಸಾಮರ್ಥ್ಯ ಪ್ರತಿಫಲಿಸಿತ್ತು
ಪಾವಿತ್ರತೆಯ ದರ್ಶನ ಭಾಗ್ಯ ಗೀತಾ ಸೇವಿಗಳಿಗೆ ದೊರಕಿತ್ತು
ಇಂದ್ರಾಣಿಯಂಗಳಕೆ ಇಂದ್ರಲೋಕ ಬಂದಿಳಿದಿತ್ತು
ಬೃಹತ್ ಭವ್ಯಮಂಟಪವು ನಿರ್ಮಾಣವಾಗಿತ್ತು
ಪಟ್ಟಾಭಿಸೀತಾರಾಮರ ಸುಂದರ ಮಂಟಪ ಮುಂದಿತ್ತು
ಅಂಗಳದ ತುಂಬೆಲ್ಲ ರಂಗೋಲಿ ಕಂಗೊಳಿಸಿತ್ತು
ಋಷಿಮಹರ್ಷಿಗಳಾಶ್ರಮಗಳೇ ಧರೆಗೆ ಇಳಿದಿತ್ತು
ತರುಪುಷ್ಪಾಲಂಕೃತದ ದಿವ್ಯ ಮಂಟಪ ಮನಸೆಳೆದಿತ್ತು
ನವಯಜ್ಞಕುಂಡದ ನವಕುಟೀರ ದಿವ್ಯವಾಗಿತ್ತು
ವೇದಮಂತ್ರಗಳ ಪಠಣ ನಿರಂತರ ಮಾರ್ದನಿಸುತ್ತಿತ್ತು
ಬಾಲಛಾತ್ರರಿಂದ ಪಾರಾಯಣ ನಡೆದಿತ್ತು
ಭಕ್ತಸ್ತೋಮ ಅಳಂದಿಗೆ ಹರಿದು ಬಂದಿತ್ತು
ಆಳಂದಿಯ ಧರ್ಮಶಾಲೆಗಳೆಲ್ಲ ತುಂಬಿ ತುಳುಕಿತ್ತು
ಪ್ರವಾಸಿ ತಂಗುದಾಣಗಳಲ್ಲಿ ಸ್ಥಳವಿಲ್ಲವಾಗಿತ್ತು
ಕಾರ್ಯಕ್ರಮಗಳ ತಾಲೀಮು ಚಂದದಿ ನಡೆದಿತ್ತು
ಊಟೋಪಚಾರಗಳು ಸುವ್ಯವಸ್ಥಿತವಾಗಿತ್ತು
ದೇಶ ವಿದೇಶಗಳಿಂದ ಸೇವಿಗಳ ಪಡೆಯೇ ಬಂದಿತ್ತು
ಗೀತಾಪರಿವಾರದ ಶಿಸ್ತು ಸಂಯಮ ಎಲ್ಲೆಡೆಯು ನೆಲೆಸಿತ್ತು.
ಜ್ಞಾನೇಶ್ವರ ಸಾನಿಧ್ಯದಲಿ ಸಾರ್ಥ ಜ್ಞಾನೇಶ್ವರೀ ಅನುಗ್ರಹ ನಮಗಾಯ್ತು
ಸಿದ್ಧಪುರುಷರ ಸಿದ್ಧೇಶ್ವರ ಪೀಠದರ್ಶನ ಸೌಭಾಗ್ಯ ನಮಗಿತ್ತು
ವೇದಶ್ರೀ ತಪೋವನದ ಪ್ರಶಾಂತ ಪರಿಸರದಿ ಮನಪುಳಕಗೊಂಡಿತ್ತು
ಗುರುಗೋವಿಂದ ಜೀ ಮಹಾರಾಜರ ಆಶೀರ್ವಾದ ಭಾಗ್ಯ ನಮಗಿತ್ತು
ಭೋಜನ ವಿತರಿಸುವ ಸೌಭಾಗ್ಯ ನಮಗೆಲ್ಲ ದೊರಕಿತ್ತು
ಗೀತಾಪರಿವಾರದವರ ಆತ್ಮೀಯತೆಯ ಪ್ರೇಮ ಸಿಂಚನವಾಗಿತ್ತು
ನಿಸ್ವಾರ್ಥಸೇವೆಯ ಪ್ರತಿಫಲದ ಅನುಭವ ಎಲ್ಲರಿಗೂ ಆಗಿತ್ತು
ಸವಿನೆನಪುಗಳ ಬುತ್ತಿಯನೇ ಹೊತ್ತು ಮನೆಯೆಡೆಗೆ ಪ್ರಯಾಣ ಬೆಳೆದಿತ್ತು.
ಪರಮ ಪೂಜ್ಯ ಸಂತ ಸ್ವಾಮಿ ಶ್ರೀ ಗೋವಿಂದ ದೇವ ಗಿರಿಜೀ ಮಹಾರಾಜ್ ಅವರ ನುಡಿಯಂತೆ ಗೀತೆಯನ್ನು ಕಲಿಯೋಣ, ಕಲಿಸೋಣ, ಜೀವನದಲ್ಲಿ ಅಳವಡಿಸಿಕೊಳ್ಳೋಣ. ಮನೆ ಮನೆಯಲ್ಲೂ ಗೀತೆ ಪ್ರತಿಯೊಬ್ಬರ ಕರದಲ್ಲೂ ಮನದಲ್ಲೂ ಗೀತೆ ನೆಲೆಸುವಂತೆ ಮಾಡೋಣ.
ಪದ್ಮ ಶ್ರೀಧರ
ಬೆಂಗಳೂರು