
ಯೋಗೇಶ್ವರ ಶ್ರೀಕೃಷ್ಣಪರಮಾತ್ಮನ ಅನುಗ್ರಹದಿಂದ ಗೀತಾಪರಿವಾರದ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿರುವ ಆದರಣೀಯ ಡಾ ಆಶು ಗೋಯಲ ಅಣ್ಣ ಮತ್ತು ಗೀತಾಪರಿವಾರದ ರಾಷ್ಟ್ರೀಯ ಉಪಾಧ್ಯಕ್ಷರಾದ ಹರಿನಾರಾಯಣ ವ್ಯಾಸ ಅಣ್ಣನವರ ಸಮ್ಮುಖದಲ್ಲಿ 3.12.2024ರಂದು ಹೊಸಕೆರೆ ಹಳ್ಳಿಯ ಸುಂದರವಾದ ಅನಂತ ಪರ್ವ ಸಭಾಂಗಣದಲ್ಲಿ ಬೆಂಗಳೂರು ಗೀತಾಪರಿವಾರ ಸ್ನೇಹ ಮಿಲನ ಸಭೆಯು ಸಂಪನ್ನವಾಯಿತು. ಈ ಸಭೆಗೆ 70ಕ್ಕೂ ಹೆಚ್ಚು ಗೀತಾ ಸೇವಿಗಳು ಸಾಕ್ಷಿಯಾಗಿದ್ದರು. 30ಕ್ಕೂ ಹೆಚ್ಚು ಗೀತಾವ್ರತಿಗಳನ್ನು ಆದರಣೀಯ ಡಾ ಆಶು ಗೋಯಲ ಅಣ್ಣನವರು ಸನ್ಮಾನಿಸಿದ್ದು ಈ ಸಭೆಗೆ ಶೋಭೆಯನ್ನು ತಂದಿತು. ವರುಣನ ಕೃಪೆಯಿಂದ ಬಹಳಷ್ಟು ಆಸಕ್ತರು ಈ ಸಭೆಗೆ ಹಾಜರಾಗಲು ಆಗಲಿಲ್ಲ. ಬಂದವರನ್ನು ರುಚಿಯಾದ ಬಿಸಿ ಬಿಸಿ ಕಷಾಯ ಸ್ವಾಗತಿಸಿತು.
ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣೀಭೂತನಾದ ಗೀತಾಚಾರ್ಯ ಕೃಷ್ಣ ಪರಮಾತ್ಮ ಹಾಗೂ ಗೀತಾಪರಿವಾರವೆಂಬ ಅತ್ಯಂತ ಆಪ್ಯಾಯಮಾನ ಕೌಟುಂಬಿಕ ವ್ಯವಸ್ಥೆಯಲ್ಲಿ ನಮ್ಮೆಲ್ಲರ ನಡುವೆ ಸುಮಧುರವಾದ ಬಾಂಧವ್ಯವನ್ನು ಬೆಸೆದಿರುವ ಪರಮ ಪೂಜ್ಯ ಸಂತ ಸ್ವಾಮಿ ಶ್ರೀ ಗೋವಿಂದ ದೇವ ಗಿರಿಜೀ ಮಹಾರಾಜ ಅವರ ಪಾದಾರವಿಂದಗಳಿಗೆ ನಮಿಸುತ್ತಾ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಆದರಣೀಯ ಡಾ. ಆಶು ಗೋಯಲ ಅಣ್ಣನವರನ್ನು ಸಭೆಗೆ ಬರಮಾಡಿಕೊಳ್ಳಲಾಯಿತು.
ಸನಾತನ ಸಂಪ್ರದಾಯದಂತೆ ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಿರಿಯ ಗೀತಾವ್ರತಿ ಜಿಷ್ಣು ಶೇಷಾದ್ರಿಅಣ್ಣ ಸುಮಧುರವಾಗಿ ಪ್ರಾರ್ಥನೆಯನ್ನು ಮಾಡಿದ್ದು ಎಲ್ಲರಿಗೂ ಮುದನೀಡಿತು. ಪರಂಪರಾನುಗತವಾಗಿ ಬಂದಿರುವ ವಾಡಿಕೆಯಂತೆ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೀತಾವ್ರತಿ ಶ್ರೀಮತಿ ಸಪ್ನಾ ಜೀರೇ ಅಕ್ಕ ಸುಶ್ರಾವ್ಯವಾಗಿ ದೀಪಪ್ರಜ್ವಲನೆಯ ಗೀತೆಯನ್ನು ಹಾಡಿದರು.
ಶ್ರೀಯುತ ಡಾ ನಾಗರಾಜ್ ಅಣ್ಣನವರು ಗಣ್ಯರನ್ನೊಳಗೊಂಡಂತೆ ಎಲ್ಲರಿಗೂ ಸ್ವಾಗತವನ್ನು ಕೋರಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಗೀತಾ ಪರಿವಾರದ ವತಿಯಿಂದ ಆದರಣೀಯ ಡಾ ಆಶು ಗೋಯಲ ಅಣ್ಣನವರಿಗೆ ಮೈಸೂರು ಪೇಟವನ್ನು ತೊಡಿಸಿ, ಶಾಲು ಹೊದಿಸಿ ಉಡುಗೊರೆಗಳೊಂದಿಗೆ ಹಣ್ಣು ಮತ್ತು ಹೂಗುಚ್ಛವನ್ನು ನೀಡಿ ಸನ್ಮಾನಿಸಲಾಯಿತು.
ಗೀತಾವ್ರತಿ ಶ್ರೀಮತಿ ಅನುಸೂಯ ನಾಯಕ್ ಅಕ್ಕ ಆದರಣೀಯ ಡಾ. ಆಶು ಗೋಯಲ ಅಣ್ಣನವರನ್ನು ಸಭೆಗೆ ಪರಿಚಯಿಸಿದರು. ನಂತರ ಆದರಣೀಯ ಡಾ. ಆಶು ಗೋಯಲ ಅಣ್ಣನವರು ಗೀತಾ ಸೇವಿಗಳು ಮತ್ತು ಗೀತಾವ್ರತಿಗಳಿಂದ ಕೂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಭಗವಂತನ ಶ್ರೀಮುಖವಾಣಿಯಾದ ಭಗವದ್ಗೀತೆಯಲ್ಲಿ ಬರುವ ಪ್ರತಿಯೊಂದು ಶ್ಲೋಕವೂ ಮಹತ್ವಪೂರ್ಣವಾದ ಅರ್ಥಗಳನ್ನು ಸ್ಫುರಿಸುತ್ತವೆ. ಭಗವದ್ಗೀತೆಯು ಸ್ಫುರಿಸುವ ಪ್ರತಿಯೊಂದು ಸೂತ್ರವೂ ವಿವಿಧ ದೃಷ್ಟಿಕೋನದಿಂದ ನೋಡಿದಾಗ ವಿವಿಧ ಅರ್ಥವನ್ನು ಕೊಡುತ್ತವೆ. ಈ ಸಭೆ ವಿಶೇಷವಾಗಿ ಗೀತಾವ್ರತಿಗಳು ಮತ್ತು ಗೀತಾಸೇವಿಗಳಿಂದ ಕೂಡಿರುವುದರಿಂದ ಅವರನ್ನುದ್ದೇಶಿಸಿ ಇಂದು ಮಾತಾಡಲು ಬಯಸುತ್ತೇನೆ ಎಂದು ತಮ್ಮ ಮಾತನ್ನು ಆರಂಭಿಸಿದರು.
ಭಗವದ್ಗೀತೆಯಲ್ಲಿ ಪ್ರಮುಖವಾಗಿ ಬರುವ 39 ಮೌಲ್ಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಆದಿಶಂಕರಾಚಾರ್ಯರು ಹೇಳುವಂತೆ ನಮ್ಮ ಪ್ರತಿಯೊಂದು ಬಯಕೆಯೂ ಮೋಕ್ಷದ ಬಯಕೆಯಾಗಬೇಕು. ವ್ಯಷ್ಟಿ ಬಯಕೆಯನ್ನು ಸಮಷ್ಟಿಯ ಬಗೆಯನ್ನಾಗಿಸುವ ಕಲೆಯನ್ನು ಗೀತಾಸೇವಿಗಳಾದ ನಾವು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಪರಮ ಪೂಜ್ಯ ಸ್ವಾಮೀಜಿಯವರ ದೃಢ ಸಂಕಲ್ಪ, ಗೀತಾಮಾತೆಯ ಮಹತ್ವ ಹಾಗೂ ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಗೀತಾಪರಿವಾರದಲ್ಲಿ ನಾವೆಲ್ಲರೂ ಗೀತಾಸೇವಿಗಳಾಗಿ ಅನೇಕ ನೈಪುಣ್ಯಗಳನ್ನೂ, ಕೌಶಲಗಳನ್ನೂ ಸಮಸ್ಯೆಗಳನ್ನು ಎದುರಿಸುವ ಚೈತನ್ಯವನ್ನೂ ಕಲಿತಿದ್ದೇವೆ ಎಂದು ಹೇಳುತ್ತಾ ಭಕ್ತಿಯೋಗದ ಹದಿನಾರನೆಯ ಶ್ಲೋಕವಾದ
ಅನಪೇಕ್ಷಃ ಶುಚಿರ್ದಕ್ಷ, ಉದಾಸೀನೋ ಗತವ್ಯಥಃ।
ಸರ್ವಾರಂಭಪರಿತ್ಯಾಗೀ, ಯೋ ಮದ್ಭಕ್ತಃ ಸ ಮೇ ಪ್ರಿಯಃ॥
ಶ್ಲೋಕವನ್ನು ಸಾಮೂಹಿಕವಾಗಿ ಪಠಣವನ್ನು ಮಾಡಿಸಿ ದೈವಿಕ ವಾತಾವರಣ ಸೃಷ್ಟಿಯಾಗುವಂತೆ ಮಾಡಿದರು. ಆ ಶ್ಲೋಕದಲ್ಲಿ ಬರುವ ಆರು ಗುಣಗಳಾದ ಅನಪೇಕ್ಷಾ, ಶುಚಿತ್ವ, ದಕ್ಷತೆ, ನಿರ್ಲಿಪ್ತ ಭಾವದಿಂದ ಕೂಡಿದ ಉದಾಸೀನತೆ, ನಾವು ಬಯಸಿದ ಸೇವೆ ದೊರಕದಿದ್ದಾಗ ವಿಚಲಿತರಾಗದಿರುವ ಗತವ್ಯಥಃ ಭಾವದಿಂದ, ಯಾವುದೇ ಸ್ಥಾನಮಾನ ಬಂದರೂ, ಹೋದರೂ ಏನೇ ಆದರೂ ಬೇಸರಿಸಿಕೊಳ್ಳದೆ, ಯಾವುದೇ ಉನ್ನತ ಸ್ಥಾನಕ್ಕೆ ಉಬ್ಬದೆ ಸಣ್ಣ ಸೇವೆ ದೊರಕಿತೆಂದು ಕುಗ್ಗದೆ ಎಲ್ಲವನ್ನೂ ಸಮಾನ ಭಾವದಿಂದ ಸ್ವೀಕರಿಸಿ ಸದಾ ಆನಂದದಿಂದ ಸೇವಾ ಮನೋಭಾವದಿಂದ ಗೀತಾಸೇವಿಗಳು ಸಮಾನ ಭಾವದಿಂದ ಸೌಹಾರ್ದದಿಂದ ಸೇವೆಯಲ್ಲಿ ನಿರತರಾಗುವಂತೆ ಕರೆನೀಡಿದರು.
ಸರ್ವಾರಂಭಪರಿತ್ಯಾಗೀ – ಸೇವೆಯ ಸಾರ್ಥಕತೆ ಇರುವುದೇ ಎಲ್ಲವನ್ನೂ ತ್ಯಾಗಮಾಡುವುದರಲ್ಲಿ, ನಿಸ್ವಾರ್ಥದಲ್ಲಿ, ಸೇವೆಗೆ ಪ್ರತಿಯಾಗಿ ಏನನ್ನೂ ಬಯಸಬಾರದು. ಏನನ್ನಾದರು ಬಯಸಿದರೆ ಅಥವಾ ಸೇವೆಗೆ ಪ್ರತಿಯಾಗಿ ಏನನ್ನಾದರೂ ಸ್ವೀಕರಿಸಿದರೆ ಸೇವೆಯಿಂದ ದೊರೆತ ಪುಣ್ಯ ಕ್ಷೀಣಿಸುತ್ತಾ ಹೋಗುತ್ತದೆ ಎಂದು ಮನದಟ್ಟಾಗುವಂತೆ ಸವಿವರವಾಗಿ ತಿಳಿಸಿದರು.
ನಂತರ ಗೀತಾಪರಿವಾರದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಯುತ ಹರಿನಾರಾಯಣ ವ್ಯಾಸ ಅಣ್ಣನವರಿಗೆ ಸ್ವಾಗತವನ್ನು ಕೋರಿ ಬೆಂಗಳೂರು ಗೀತಾಪರಿವಾರದ ಕಡೆಯಿಂದ ಸನ್ಮಾನಿಸಲಾಯಿತು. ಬೆಂಗಳೂರು ಗೀತಾಪರಿವಾರದ ಪ್ರತಿನಿಧಿ ಶ್ರೀಯುತ ತೇಜಸ್ ಪೂಜಾರಿ ಅಣ್ಣ ಶ್ರೀಯುತ ಹರಿನಾರಾಯಣ ವ್ಯಾಸ ಅಣ್ಣನವರನ್ನು ಸಭೆಗೆ ಪರಿಚಯ ಮಾಡಿಕೊಟ್ಟರು.
ಶ್ರೀಯುತ ಹರಿನಾರಾಯಣ ವ್ಯಾಸ ಅಣ್ಣನವರು ಸಭೆಯನ್ನುದ್ದೇಶಿಸಿ ಮಾತನಾಡಿದರು. “ಗೀತೆಯನ್ನು ಕಲಿಯಿರಿ, ಕಲಿಸಿರಿ, ಜೀವನದಲ್ಲಿ ಅಳವಡಿಸಿಕೊಳ್ಳಿರಿ” ಎಂಬ ಗೀತಾಪರಿವಾರದ ಧ್ಯೇಯವಾಕ್ಯವನ್ನೂ, “ಮನೆ ಮನೆಯಲ್ಲೂ ಗೀತೆ, ಪ್ರತಿಯೊಬ್ಬರ ಕೈಯಲ್ಲೂ ಗೀತೆ” ಎಂಬ ಪರಮ ಪೂಜ್ಯ ಸ್ವಾಮೀಜಿಯವರ ಪರಮೋದ್ದೇಶವನ್ನು ನಾವೆಲ್ಲರೂ ಸಾಕಾರಗೊಳಿಸಬೇಕೆಂದು ಹೇಳಿದರು. ಸನಾತನಧರ್ಮವನ್ನು ಮೈಗೂಡಿಸಿಕೊಂಡಿರುವ ಹಿಂದುತ್ವವನ್ನೂ ಕಾಪಾಡುತ್ತಿರುವಲ್ಲಿ ಆರ್ ಎಸ್ ಎಸ್ ಬಿಟ್ಟರೆ ಗೀತಾಪರಿವಾರದ ಅಂಗ ಸಂಸ್ಥೆಯಾದ ‘ಲರ್ನ್ ಗೀತಾ ಸಂಸ್ಥೆ’ ಮುಂಚೂಣಿಯಲ್ಲಿದ್ದು ಎರಡನೇ ಸ್ಥಾನವನ್ನು ಪಡೆದಿದೆ ಎಂಬ ಸಂತೋಷದ ವಿಷಯವನ್ನು ಹಂಚಿಕೊಂಡರು. ಹಿಂದುತ್ವ ಉಳಿಯ ಬೇಕಾದರೆ ಬಾಲಸಂಸ್ಕಾರ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ವಿವರಿಸುತ್ತಾ ಬಾಲಸಂಸ್ಕಾರವನ್ನು ನೀಡುವಲ್ಲಿ ಗೀತಾಪರಿವಾರದ ಪಾತ್ರ ಮತ್ತು ಹಮ್ಮಿಕೊಂಡಿರುವ ಯೋಜನೆಗಳ ಬಗೆಗೆ ಸವಿವರವಾಗಿ ವಿವರಿಸಿದರು. ರಾಷ್ಟ್ರೀಯ ಗೀತಾ ಪರಿವಾರವು ದೇಶದ ನಾಲ್ಕೂ ದಿಕ್ಕುಗಳಲ್ಲೂ ಉತ್ತರಾಂಚಲ, ದಕ್ಷಿಣಾಂಚಲ, ಪೂರ್ವಾಂಚಲ, ಪಶ್ಚಿಮಾಂಚಲ ಶಿಬಿರಗಳನ್ನು ವಿವಿಧ ಸ್ಥಳಗಳಲ್ಲಿ ನಡೆಸುವುದರ ಬಗೆಗೆ ಮಾಹಿತಿ ನೀಡಿದರು.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಹೊಸ ಕಾರ್ಯಕರ್ತರಿಗಾಗಿ ಇದೇ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣಾಂಚಲ ತರಬೇತಿ ಶಿಬಿರವನ್ನು ಹೈದರಾಬಾದಿನಲ್ಲಿ ಆಯೋಜಿಸಲಾಗಿದೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣಮಾಡಲು ರಾಷ್ಟ್ರದ ಹಿತದೃಷ್ಟಿಯಿಂದ ಈ ಪವಿತ್ರವಾದ ಕರ್ಮಯಜ್ಞದಲ್ಲಿ ಗೀತಾ ಸೇವಿಗಳಾದ ತಾವೆಲ್ಲರೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು. ಕರ್ನಾಟಕದ ಪರವಾಗಿ ಬೆಂಗಳೂರು ಗೀತಾಪರಿವಾರದವರು ಈ ಶಿಬಿರದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೀತಾಸೇವಿ ಶ್ರೀಮತಿ ಪೂಜಾ ಡೋಂಗ್ರೆ ಅಕ್ಕನವರು ಎಲ್ಲರನ್ನೂ ಹುರಿದುಂಬಿಸಿದರು
2023 ಮತ್ತು 2024ನೇ ಸಾಲಿನಲ್ಲಿ ಗೀತಾವ್ರತಿಗಳಾಗಿ ಅಂದಿನ ಸಭೆಯಲ್ಲಿ ಹಾಜರಾಗಿದ್ದ ಮೂವತ್ತಕ್ಕೂ ಹೆಚ್ಚು ಬೆಂಗಳೂರಿನ ಗೀತಾವ್ರತಿಗಳಿಗೆ ಆದರಣೀಯ ಡಾ. ಆಶು ಗೋಯಲ ಅಣ್ಣನವರು ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕದೊಂದಿಗೆ ಹೂಗುಚ್ಛವನ್ನು ನೀಡಿ ಸನ್ಮಾನಿಸಿದರು. ಕಿರಿಯರಿಂದ ಹಿಡಿದು ಹಿರಿಯರವರೆಗೂ ಸನ್ಮಾನವನ್ನು ಸ್ವೀಕರಿಸಿದ್ದು ಇಂದಿನ ವಿಶೇಷತೆಗಳಲ್ಲಿ ಒಂದಾಗಿತ್ತು. ಸನ್ಮಾನಿತರ ಮುಖಗಳಲ್ಲಿ ಧನ್ಯತಾಭಾವದಿಂದ ಕೂಡಿದ ಆನಂದ ಎದ್ದುಕಾಣುತ್ತಿತ್ತು.
ಮೈಸೂರಿನಿಂದ ಆಗಮಿಸಿದ್ದ ಮೈಸೂರು ಗೀತಾಪರಿವಾರದ ಪ್ರತಿನಿಧಿಗಳು ಮೈಸೂರು ಗೀತಾಪರಿವಾರದ ವತಿಯಿಂದ ಹೊರತರುತ್ತಿರುವ ‘ಪರಿವಾರದ ಮಾತು’ ಪತ್ರಿಕೆಯನ್ನು ಆದರಣೀಯ ಡಾ. ಆಶು ಗೋಯಲ ಅಣ್ಣನವರಿಂದ ಬಿಡುಗಡೆ ಮಾಡಿಸಿದರು.
ಗೀತಾ ಪರಿವಾರದ
ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಬಿಯಾನಿ ಅಕ್ಕ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ.ಅರ್ಪಿತಾ ಝಂವರ ಅಕ್ಕ ಅವರು ಉಪಸ್ಥಿತರಿದ್ದರು. ಮೈಸೂರು ಧರ್ಮಸ್ಥಳ ಸನಿಹದ ಮುಂಡಾಜೆ, ಶಿವಮೊಗ್ಗ ಮುಂತಾದ ಕಡೆಗಳಿಂದ ಗೀತಾಸೇವಿಗಳು ಈ ಕಾರ್ಯಕ್ರವದಲ್ಲಿ ಭಾಗವಹಿಸಿದ್ದರು.
ಬೆಂಗಳೂರು ಗೀತಾಪರಿವಾರದ ಶ್ರೀಮತಿ ಮೀನಲ್ ಎಂ ದಾಣಿ ಅಕ್ಕ ವಂದನಾರ್ಪಣೆಯನ್ನು ಮಾಡಿದರು. ಗೀತಾವ್ರತಿ ಪುಟಾಣಿ ಆದ್ಯಾ ಭಾವೆ ಅಕ್ಕನವರು ತಮ್ಮ ಸುಮಧುರ ಕಂಠದಿಂದ ಮಾಡಿದ ಸಮಾರೋಪ ಪ್ರಾರ್ಥನೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಜಿನಿ ಜಿನಿ ಮಳೆಗೆ ಹಿತಕರವಾಗಿ ಮುದನೀಡುವಂತಿದ್ದ ಚಟ್ನಿಯೊಂದಿಗೆ ಬಿಸಿ ಬಿಸಿ ಶಾವಿಗೆ. ರಾಗಿ ಹಾಲುಬಾಯಿ, ಮೈಸೂರುಪಾಕ್, ಮಸಾಲೆ ಆಂಬೊಡೆ, ಸ್ಟ್ರಾಂಗ್ ಕಾಫಿಯ ಸೇವನೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಸೆರೆಹಿಡಿದ ಛಾಯಾಚಿತ್ರಗಳು, ಸಣ್ಣ ಸಣ್ಣ ವಿಡಿಯೋಗಳು ಸುಂದರವಾಗಿ ಜರುಗಿದ ಸಭೆಗೆ ಸಾಕ್ಷಿಯಾಗಿವೆ.
ನಿರೂಪಣೆ ಮಾಡುವ ಮತ್ತು ಲೇಖನದ ಮೂಲಕ ಈ ಸುಂದರ ಗಳಿಗೆಯನ್ನು ದಾಖಲಿಸುವ ಸೌಭಾಗ್ಯ ನನ್ನ ಪಾಲಿಗೆ ದೊರೆತದ್ದು ಶ್ರೀಕೃಷ್ಣನ ಕೃಪೆ ಎಂದೆಣಿಸುತ್ತೇನೆ.